ಕಾಡು ಲೂಸರ್ನ್ ಸೊಪ್ಪು

 ಮೆಲಿಲೋಟಸ್ ಇಂಡಿಕ ಎಂಬ ವೈಜ್ಞಾನಿಕ ಹೆಸರಿನ ಏಕವಾರ್ಷಿಕ ಅಥವಾ ದ್ವೈವಾರ್ಷಿಕ ಮೂಲಿಕೆ ಸಸ್ಯ. ಎಲ್ಲೊ ಸ್ವೀಟ್ ಕ್ಲವರ್ ಎಂಬುದು ಇದರ ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು. ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದೆ. ಬಹಳ ಹಿಂದಿನಿಂದ ಭಾರತದಲ್ಲೆಲ್ಲ (ಬಹುತೇಕ ಪಂಜಾಬು, ಉತ್ತರಪ್ರದೇಶ, ದೆಹಲಿ, ಬಿಹಾರ್) ವಿಸ್ತಾರವಾಗಿ ಸಾಗುವಳಿ ಮಾಡಿದ ಹೊಲಗಳಲ್ಲಿ ಮೇವಿನ ಸಲುವಾಗಿ ಬೆಳೆಸುತ್ತಿದ್ದಾರೆ. ಪ್ರಪಂಚದ ಬೇರೆ ದೇಶಗಳಲ್ಲೂ ಹರಡಿದೆ. ಇದಕ್ಕೆ ಸಮಶೀತೋಷ್ಣ ಮತ್ತು ಉಷ್ಣಹವೆ ಉತ್ತಮ. ಎಲೆಗಳು ಮೂರು ಕಿರು ಎಲೆಗಳಿಂದ (ಪರ್ಣಿಕೆ) ಕೂಡಿದ ಸಂಯುಕ್ತ ಎಲೆಗಳು. ಪರ್ಣಿಕೆಗಳು ನೀಳವಾಗಿವೆ. ಅವುಗಳ ಅಂಚು ನೇರ. ಹೂಗೊಂಚಲು ಅಂತ್ಯಾರಂಭಿ ಮಾದರಿಯದು. ಎಲೆಗಳ ಕಂಕುಳಲ್ಲಿ ಹುಟ್ಟುತ್ತದೆ. ಹೂಗಳು ಚಿಕ್ಕವು. ಅವುಗಳ ಬಣ್ಣಹಳದಿ. ಫಲಗಳು ಚಪ್ಪಟೆ. ಅವುಗಳ ಬಣ್ಣ ಆಲಿವ್ ಹಸಿರು. ಕಾಡು ಲೂಸರ್ನ್ ಸೊಪ್ಪಿಗೆ ತನ್ನದೇ ಆದ ಒಂದು ರೀತಿಯ ಮಧುರವಾಸನೆಯ ಕಹಿರುಚಿ ಇದೆ. ಇದಕ್ಕೆ ಕಾರಣ ಅದರಲ್ಲಿರುವ ಕೂಮರಿನ್ ಎಂಬ ರಾಸಾಯನಿಕ ವಸ್ತು.

 ಕಾಡು ಲೂಸರ್ನ್ ಸೊಪ್ಪನ್ನು ಪಂಜಾಬಿನಲ್ಲಿ ಸುಮಾರು 3 ಲಕ್ಷ ಎಕರೆ ಪ್ರದೇಶದಲ್ಲಿ ಮೇವಿಗಾಗಿ ಬೆಳೆಸುತ್ತಾರೆ. ಅಲ್ಲಿ ಇದಕ್ಕೆ ಸೆಂಜಿ ಎಂಬ ಹೆಸರಿದೆ. ಇದನ್ನು ಆಹಾರದ ಬೆಳೆಗಳಾದ ಗೋದಿ, ಜೋಳ ಮತ್ತು ಬತ್ತದೊಂದಿಗೆ ಅಥವಾ ಹಣದ ಬೆಳೆಗಳಾದ ಹತ್ತಿ, ಕಬ್ಬು ಮತ್ತು ತಂಬಾಕಿನೊಂದಿಗೆ ಪರ್ಯಾಯ ಬೆಳೆಯಾಗಿ ಬೆಳೆಸುವುದೇ ಹೆಚ್ಚು. ಬಾರ್ಲಿ ಮತ್ತು ಸಜ್ಜೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದೂ ಉಂಟು. ಪಂಜಾಬಿನ ನೀರಾವರಿ ಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿ ಬೆಳೆಸುತ್ತಿದ್ದರೂ ಕಡಿಮೆ ನೀರಾವರಿ ಸೌಕರ್ಯವಿರುವ ಪ್ರದೇಶಗಳಲ್ಲೂ ಬೆಳೆಯಬಲ್ಲದು. ಎಲ್ಲ ತರದ ಮಣ್ಣಿನಲ್ಲೂ ಬೆಳೆಯಬಲ್ಲ ಇದಕ್ಕೆ ಕ್ಷಾರೀಯ ಮತ್ತು ಫಲವತ್ತಾದ ಮಣ್ಣು ಉತ್ತಮ. ಬಿತ್ತನೆಯ ಕಾಲ ಸೆಪ್ಟೆಂಬರ್‍ನಿಂದ ನವೆಂಬರ್‍ವರೆಗೆ. ಬಿತ್ತನೆಯ ಮುನ್ನ ಹೊಲವನ್ನು ಮೂರು ನಾಲ್ಕು ಬಾರಿ ಮತ್ತು ಹದಗೊಳಿಸಬೇಕು. ಬೀಜಗಳ ಸಿಪ್ಪೆ ಗಟ್ಟಿಯಾಗಿರುವುದರಿಂದ, ಬಿತ್ತನೆಯ ಮುಂಚೆ ಸಿಪ್ಪೆಗಳನ್ನು ಒಡೆಯಬೇಕು. ಬೀಜಗಳನ್ನು ನೀರಿನಲ್ಲಿ 6-8 ದಿನ ನೆನೆಸಿದರೆ ಉತ್ತಮ. ಇಲ್ಲವೆ, ಬಿತ್ತಿದ ಮೇಲೆ ಹೊಲದಲ್ಲಿ ಒಂದು ವಾರದ ತನಕ ನೀರು ನಿಲ್ಲಿಸಬೇಕು. ಸಾಧಾರಣವಾಗಿ ಎಕರೆಯೊಂದಕ್ಕೆ 40-50 ಪೌಂಡು ಬೀಜಗಳನ್ನು ಬಿತ್ತಬಹುದು. ಪ್ರಾರಂಭದಲ್ಲಿ ಕಳೆಕೀಳುವುದು ಅಗತ್ಯ. ಪರ್ಯಾಯ ಬೆಳೆಗಾಗಿ ಬೆಳೆಸುವುದರಿಂದ ಇದಕ್ಕೆಂದೇ ಪ್ರತ್ಯೇಕವಾಗಿ ಗೊಬ್ಬರ ಹಾಕುವ ಅಗತ್ಯವಿಲ್ಲ. ಸಸ್ಯಗಳು ಎಳೆಯದರಲ್ಲಿ ಡೌನಿಮಿಲ್ಡ್ಯೂ ಮತ್ತು ಪೌಡರಿಮಿಲ್ಡ್ಯೂ ರೋಗಗಳಿಗೆ ತುತ್ತಾಗಬಹುದು. ಫೆಬ್ರವರಿ, ಏಪ್ರಿಲ್ ತಿಂಗಳಲ್ಲಿ ಕೊಯ್ಲು ಮಾಡುತ್ತಾರೆ. ಒಂದು ಬೆಳೆಯನ್ನು ಮೂರು ನಾಲ್ಕು ಸಲ ಕೊಯ್ಲು ಮಾಡಬಹುದು. ಎಕರೆಯೊಂದರ ಉತ್ಪನ್ನ 150 ರಿಂದ 250 ಟನ್‍ಗಳಷ್ಟು. ಕಾಡು ಲೂಸರ್ನ್ ಸೊಪ್ಪು ಬಹಳ ರುಚಿಕರವಾದ ಮೇವು. ಆದರೆ ಗಿಡಗಳು ಹೂ ಬಿಡುವುದಕ್ಕೆ ಮುಂಚೆಯೇ ಮೇವಾಗಿ ಉಪಯೋಗಿಸಬಾರದು. ಏಕೆಂದರೆ, ಈ ಸ್ಥಿತಿಯಲ್ಲಿ ದನಗಳು ತಿಂದರೆ ಅವು ಊದು ರೋಗಕ್ಕೆ ಈಡಾಗುವ ಸಂಭವವುಂಟು. ಅಲ್ಲದೆ ಈ ಸೊಪ್ಪನ್ನು ಭೂಸದೊಂದಿಗೆ ಮಿಶ್ರಮಾಡಿಯೇ ಬಳಸಬೇಕು. ಬರಿಯ ಸೊಪ್ಪನ್ನೇ ದನಗಳಿಗೆ ತಿನಿಸಿದರೆ ಅವಕ್ಕೆ ವಾತರೋಗ, ಒಗ್ಗದಿಕೆ, ಅಲಸಿಕೆ ಮುಂತಾದ ಕೆಟ್ಟ ಪರಿಣಾಮಗಳುಂಟಾಗುತ್ತವೆ. ಇದರಲ್ಲಿ ಸಾರಜನಕದ ಅಂಶ ಹೆಚ್ಚಾಗಿದ್ದು, ಭೂಮಿಯ ಸಾರಜನಕವನ್ನು ಹೆಚ್ಚಿಸುವಲ್ಲಿ ಸಸ್ಯಗಳು ಸಹಾಯಕವಾಗಿವೆ. ಈ ಗಿಡ ಭೂಸವೆತವನ್ನು ತಡೆಗಟ್ಟುವುದರಲ್ಲಿ ಸಹಕರಿಸಿ ಭೂರಕ್ಷಣೆಗೆ ಸಹಾಯಕವಾಗಿದೆ. ಪಂಜಾಬಿನಲ್ಲಿ ಇದನ್ನು ಹಸಿರುಗೊಬ್ಬರವಾಗಿ ಉಪಯೋಗಿಸುತ್ತಾರೆ. ಮೇಲಿಂದ ಮೇಲೆ ಬತ್ತ ಮತ್ತು ಕಬ್ಬುಗಳೊಂದಿಗೆ ಪರ್ಯಾಯ ಬೆಳೆಯಾಗಿ ಬೆಳೆಸುವುದರಿಂದ ಮುಖ್ಯ ಬೆಳೆಯ ಉತ್ಪತ್ತಿಯೂ ಹೆಚ್ಚುತ್ತದೆ ಎಂದು ತಿಳಿದು ಬಂದಿದೆ.

(ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ